ಭಟ್ಟಿ
 	ಸುಮಾರು 6ನೆಯ ಶತಮಾನ. ಸಂಸ್ಕøತ ಮಹಾಕಾವ್ಯ ಪರಂಪರೆಯ ಪ್ರಸಿದ್ಧ ಪ್ರಾಚೀನಕವಿಗಳಲ್ಲಿ ಒಬ್ಬ. ಭಟ್ಟಿಕಾವ್ಯ ಎಂದೇ ಪ್ರಸಿದ್ಧಿ ಹೊಂದಿರುವ ರಾವಣವಧ ಎಂಬ ಕಾವ್ಯದ ಕರ್ತೃ.

	ಕವಿಭಟ್ಟಿಯ ಬಗೆಗೆ ನಿಖರವಾಗಿ ತಿಳಿದಿರುವುದು ಅತ್ಯಲ್ಪ. ಇವನಿಗೆ ಭಟ್ಟಿ ಸ್ವಾಮಿ. ಭರ್ತೃಸ್ವಾಮಿ ಎಂಬ ಹೆಸರುಗಳೂ ಇದ್ದಂತೆ ತಿಳಿದುಬರುತ್ತದೆ. ಮಹಾವೈಯಾಕರಣಿಯಾಗಿದ್ದ ಭಟ್ಟಿ ಶ್ರೀಸ್ವಾಮಿಯ ಮಗ ಎಂದು ಒಬ್ಬ ವ್ಯಾಖ್ಯಾನಕಾರ ಹೇಳಿದರೆ, ಇನ್ನೊಬ್ಬ (ವಿದ್ಯಾವಿನೋದ) ಶ್ರೀಧರಸ್ವಾಮಿ ಪುತ್ರ ಎನ್ನುತ್ತಾನೆ. ಮತ್ತೊಬ್ಬ ವ್ಯಾಖ್ಯಾನಕಾರ (ಭರತ) ಭಟ್ಟಿಯನ್ನು ಭರ್ತೃಹರಿ ಎಂದು ಕರೆದಿದ್ದಾನೆ. ಜೊತೆಗೆ, ಭಟ್ಟಿ ಭರ್ತೃಹರಿ ಇಬ್ಬರೂ ಒಂದೇ ಎಂಬ ವಾದವೂ ಇದೆ. ಆದರೆ ಈ ಬಗ್ಗೆ ಭಿನ್ನಾಭಿಪ್ರಾಯಗಳೂ ಇವೆ. ಹೀಗೆಯೇ ಇವನ ಕಾಲದ ಬಗ್ಗೆ ಕೂಡ. ಇವನ ಕಾಲವ್ಯಾಪ್ತಿ 5ನೆಯ ಶತಮಾನದಿಂದ 6ನೆಯ ಶತಮಾನದ ತನಕ ಹೊಯ್ದಾಡುತ್ತಿದೆ.

	ಶ್ರೀಧರಸೇನ (ಅಥವಾ ಜಯಮಂಗಲನ ಪಾಠದಂತೆ ಶ್ರೀಧರಸೂನು ನರೇಂದ್ರ) ಎಂಬ ರಾಜ ಆಳುತ್ತಿದ್ದ ವಲಭಿಯಲ್ಲಿ ಭಟ್ಟಿ ತನ್ನ ಕಾವ್ಯವನ್ನು ಬರೆದನೆಂದು ಕಾವ್ಯದ ಕೊನೆಯ ಶ್ಲೋಕ ತಿಳಿಸುತ್ತದೆ (ಕಾವ್ಯಮಿದಂ ವಿಹಿತಂ ಮಯಾವಲಭ್ಯಾಂ ಶ್ರೀಧರಸೇನ-ನರೇಂದ್ರ ಪಾಲಿತಾಯಾಂ ಕೀರ್ತಿರತೋಭವತಾತ್ ನೇಪಸ್ಯ ತಸ್ಯ ಪ್ರೇಮಕರಃ ಕ್ಷಿತಿಪೋ ಯತಃ ಪ್ರಜಾನಾಂ). ಶ್ರೀಧರಸೇನ ಮೈತೃಕವೆಂಬ ವಂಶದ ರಾಜ. ಮೈತೃಕರು ಸುಮಾರು 5ನೆಯ ಶತಮಾನದಲ್ಲಿ ಉತ್ತರಭಾರತದಲ್ಲಿ ಆಳುತ್ತಿದ್ದರು. ವಲಭಿ ಇವರ ರಾಜಧಾನಿಯಾಗಿತ್ತು. ಈ ವಂಶದ ಅರಸರಲ್ಲಿ ನಾಲ್ವರು ಧರಸೇನರೂ ಇಬ್ಬರು ಮೂವರು ಧ್ರುವಸೇನರೂ ಇದ್ದಾರೆ. ಇಮ್ಮಡಿ ಧರಸೇನ (570-589) ಭಟ್ಟಿಯ ಪೋಷಕನಾಗಿದ್ದಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ. ರಾವಣವಧ ಒಂದು ಮಹಾಕಾವ್ಯ. ಇದು ಹಲವು ವೃತ್ತಗಳಲ್ಲಿ ರಚಿತವಾಗಿದೆ. ವಿಶೇಷವಾಗಿ ಶ್ಲೋಕ ಉಪಜಾತಿ ವೃತ್ತಗಳಿವೆ. ವಂಶಸ್ಥ ತನುಮಧ್ಯಾ ಎಂಬ ಚಿಕ್ಕ ವೃತ್ತಗಳೂ ಪೃಥ್ವೀ, ಶಾರ್ದೂಲ ವಿಕ್ರೀಡಿತ, ಸ್ರಗ್ಧರಾ ಎಂಬ ದೀರ್ಘವೃತ್ತಗಳೂ ಇವೆ. ಅಶ್ವಲಲಿತ, ಅಪರವಕ್ತ್ರ, ಗಾಧಾ, ನರ್ದಟಕಗಳೆಂಬ ಅಪರೂಪ ವೃತ್ತಗಳೂ ಇವೆ.

	ರಾಮನ ಜನ್ಮ ವೃತ್ತಾಂತದಿಂದ ತೊಡಗಿ ಮತ್ತೆ ಅವನು ಅಯೋಧ್ಯೆಗೆ ಹಿಂತಿರುಗುವ ತನಕದ ವಾಲ್ಮೀಕಿ ರಾಮಾಯಣದ ಕಥೆಯನ್ನು ಭಟ್ಟಿ 22 ಸರ್ಗಗಳಲ್ಲಿ ವಿಸ್ತರಿಸಿದ್ದಾನೆ. ಇದರಲ್ಲಿ 1624 ಶ್ಲೋಕಗಳಿವೆ. ರಾಮನ ಜನ್ಮ, ಸೀತಾಪರಿಣಯ, ರಾಮನ ವನಗಮನ, ಸೀತಾಪಹಾರ, ಸುಗ್ರೀವ ಸಖ್ಯ ಸೀತಾನ್ವೇಷಣ, ಅಶೋಕವನ ಭಂಗ, ಮಾರುತಿ ಬಂಧನ, ಸೀತಾಭಿಜ್ಞಾನ ದರ್ಶನ, ವಿಭೀಷಣ ಶರಣಾಗತಿ, ಸೇತುಬಂಧನ, ಯುದ್ಧ, ರಾವಣವಧ, ವಿಭೀಷಣಾಭೀಷೇಕ, ಅಗ್ನಿಶೋಧನ, ಪ್ರತ್ಯಾಗಮನ, ಪಟ್ಟಾಭಿಷೇಕ- ಈ ರೀತಿ ಕಥೆ ಮೂಲ ವಾಲ್ಮೀಕಿ ರಾಮಾಯಣದ ಸರಣಿಯನ್ನೇ ಅನುಸರಿಸಿದೆ. ಕವಿ ಯಾವ ಬದಲಾವಣೆಯನ್ನೂ ಮಾಡಿಕೊಂಡಿಲ್ಲ. ಕಾವ್ಯದಲ್ಲಿ ಕಥೆ ಸರಾಗವಾಗಿ ಮುಂದೆ ಹರಿಯುತ್ತದೆ. ಪ್ರಭಾತ ವರ್ಣನೆ (ಸರ್ಗ 11) ಹೊರತು ದೀರ್ಘವಾದ ವರ್ಣನೆಗಳಿಗೆ ಕವಿ ಕೈಹಾಕಿಲ್ಲ. ದೀರ್ಘಸಮಾಸಗಳ ಹಾವಳಿ ಇಲ್ಲ. ಶಬ್ದಾಲಂಕಾರಗಳ ಗೋಜಿಲ್ಲ. ಹೀಗೆ ಕಾವ್ಯ ಸಾಮಾನ್ಯವಾಗಿ ಸುಲಭವಾಗಿದೆ. ಆದರೂ ವಿಶಿಷ್ಟ ಪದರೂಪಗಳ ಪ್ರಯೋಗ ಪರಿಚಯಕ್ಕೆಂದೇ ಹೊರಟಿರುವುದರಿಂದ ಅದನ್ನು ಅನುಸರಿಸಲು ಸ್ವಲ್ಪ ಅಡಚಣೆಯುಂಟಾಗುವುದು ಸಹಜವೇ ಆಗಿದೆ. ಕವಿಯೇ ಹೇಳಿಕೊಂಡಂತೆ ವ್ಯಾಕರಣದ ಕಣ್ಣುಳ್ಳವರಿಗೆ ಈ ಕಾವ್ಯ ದಾರಿದೀವಿಗೆ. ವ್ಯಾಕರಣದ ಸಹಾಯವಿಲ್ಲದವರು ಈ ಕಾವ್ಯವನ್ನು ಓದಿದರೆ, ಕುರುಡರು ನೋಡಿದಂತೆ ಆಗುತ್ತದೆ. ವಿದ್ವತ್ತಿನ ಕಡೆಗಿರುವ ತನ್ನ ಒಲವನ್ನು ಕವಿ ತಾನೆ ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಕಾವ್ಯ ವ್ಯಾಖ್ಯಾನವಿಲ್ಲದೆ ಸುಲಭವಾಗಿ ಅರ್ಥವಾಗುವುದಿಲ್ಲ. ಇಂಥ ಕಾವ್ಯ ಬಲ್ಲವರಿಗೆ ಹಬ್ಬ. ವಿದ್ವತ್ತಿಲ್ಲದವರು ಇದರಿಂದ ಬಲು ದೂರ ಇರಬೇಕಾಗುತ್ತದೆ ಎಂಬುದು ಕವಿಯ ಅಭಿಪ್ರಾಯ. ಇದನ್ನು ದೋಷವೆಂದು ಎಣಿಸಬಹುದಾದರೂ ಕವಿಗೆ ಇಲ್ಲಿ ಕಾವ್ಯ ಬರೆಯುವುದಕ್ಕಿಂತಲೂ ಭಾಷೆಯ ಬಳಕೆ ಎತ್ತಿತೋರಿಸುವುದು ಮುಖ್ಯ ಗುರಿ ಎಂಬುದನ್ನು ಮರೆಯುವಂತಿಲ್ಲ.

	ಶಾಸ್ತ್ರದೃಷ್ಟಿಯಿಂದ ಈ ಕಾವ್ಯದಲ್ಲಿ ಪ್ರಕೀರ್ಣ ಕಾಂಡ, ಅಧಿಕಾರ ಕಾಂಡ, ಪ್ರಸನ್ನ ಕಾಂಡ, ತಿಙಂತ ಕಾಂಡ ಎಂಬ 4 ಕಾಂಡಗಳು ಮತ್ತು 22ಸರ್ಗಗಳು ಇವೆ. ಪ್ರಕೀರ್ಣ ಕಾಂಡದಲ್ಲಿರುವ 5 ವರ್ಗಗಳು ವ್ಯಾಕರಣದ ನಾನಾ ನಿಯಮಗಳನ್ನು ಕುರಿತದ್ದಾಗಿವೆ. ಯಾವೊಂದು ವ್ಯಾಕರಣ ಪ್ರಕರಣಕ್ಕೂ ಮೀಸಲಾಗಿಲ್ಲ. ಅಧಿಕಾರ ಕಾಂಡದಲ್ಲಿ 4 ವರ್ಗಗಳಿದ್ದು ಪಾಣಿನಿಯ ವಿಶೇಷ ನಿಯಮಗಳಿಗೆ ಉದಾಹರಣೆಗಳನ್ನು ಒದಗಿಸುತ್ತವೆ. ಒಂದೊಂದು ಪ್ರಕರಣಕ್ಕೆ (ಅಧಿಕಾರ) ಕೆಲವು ಶ್ಲೋಕಗಳಂತೆ ವರ್ಗೀಕರಿಸಬಹುದು. ಉದಾಹರಣೆಗೆ ಸ್ರ್ತೀಲಿಂಗಾಧಿಕಾರಕ್ಕೆ. 7ನೆಯ ಸರ್ಗದ 68-77 ಶ್ಲೋಕಗಳು. ಆದರೆ ವ್ಯಾಕರಣ ಭಾಗಗಳೆಲ್ಲ ಪ್ರಾತಿನಿಧ್ಯ ಪಡೆದಿವೆ ಎಂದು ಹೇಳಲಾಗುವುದಿಲ್ಲ ಪ್ರಸನ್ನ ಕಾಂಡದಲ್ಲಿ 4 ವರ್ಗಗಳಿವೆ. (10-13 ಸರ್ಗಗಳು). ಇಲ್ಲಿ ಅಲಂಕಾರ, ಹಾಗೂ ಭಾಷಾಪ್ರಯೋಗಗಳ ಪ್ರದರ್ಶನವಿದೆ. 21 ಶ್ಲೋಕಗಳಲ್ಲಿ 2 ಶಬ್ದಾಲಂಕಾರಗಳೂ 52 ಶ್ಲೋಕಗಳಲ್ಲಿ (22-74) 36 ಅರ್ಥಾಲಂಕಾರಗಳೂ ಉದಾಹೃತವಾಗಿವೆ: ಅನುಪ್ರಾಸ, ಯಮಕ (20 ಬಗೆ), ದೀಪಕ (3 ಬಗೆ), ರೂಪಕ (2), ಉಪಮಾ (5), ಅರ್ಥಾಂತರ ನ್ಯಾಸ ಆಕ್ಷೇಪ (2), ವ್ಯತಿರೇಕ, ವಿಭಾವನಾ, ಸಮಾಸೋಕ್ತಿ, ಅತಿಶಯೋಕ್ತಿ, ಯಥಾಸಂಖ್ಯ, ಉತ್ಪ್ರೇಕ್ಷಾ, ವಾರ್ತಾ, ಪ್ರೇಯಸ್, ರಸವತ್, ಊರ್ಜಸ್ತಿ, ಪರ್ಯಾಯೋಕ್ತಿ, ಸಮಾಹಿತ, ಉದಾರ (3), ಶ್ಲಿಷ್ಟ (3), ಅಪಹ್ನುತಿ, ವಿಶೇಷೋಕ್ತಿ, ವ್ಯಾಜಸ್ತುತಿ, ಉಪಮಾ ರೂಪಕ, ತುಲ್ಯಯೋಗಿತಾ, ನಿದರ್ಶನ, ವಿರೋಧ, ಉಪಮೇಯೋಪಮಾ, ಸಹೋಕ್ತಿ, ಪರಿವೃತ್ತಿ, ಸಸಂದೇಹ, ಅನನ್ವಯ, ಉತ್ಪ್ರೇಕ್ಷಾವಯವ, ಸಂಸೃಷ್ಟಿ, ಆಶೀ; ಹೇತು ಮತ್ತು ನಿಪುಣ. ಮಾಧುರ್ಯ ಹಾಗೂ ಭಾವಿಕ ಗುಣಗಳು ಒಂದೊಂದು ಪೂರ್ಣಸರ್ಗಗಳಲ್ಲಿ (11-12) ಪ್ರದರ್ಶಿತವಾಗಿವೆ. 13ನೆಯ ಸರ್ಗ ಒಂದು ಅಪೂರ್ವ ಪ್ರಯೋಗ. ಸಂಸ್ಕøತ ಪ್ರಾಕೃತಗಳೆರಡಕ್ಕೂ ಸಮವಾದ ಪದಗಳಿರುವ ಶ್ಲೋಕಗಳನ್ನು ಇಲ್ಲಿ ಕಾಣಬಹುದು. ತಿಙಂತಕಾಂಡ ಕ್ರಿಯಾಪದಗಳಿಗೆ ಮೀಸಲು. ಒಂದೊಂದು ಲಕಾರಕ್ಕೆ ಒಂದೊಂದು ವರ್ಗದಂತೆ 9 ವರ್ಗಗಳಿವೆ. ಒಂದು ವರ್ಗದಲ್ಲಿ ಬಳಸಲಾಗುವ ಕ್ರಿಯಾಪದಗಳು ಒಂದೇ ಲಕಾರದಲ್ಲಿರುತ್ತವೆ.

	ವ್ಯಾಕರಣಶಾಸ್ತ್ರಕ್ಕಿಂತಲೂ ಅಲಂಕಾರ ಶಾಸ್ತ್ರದ ಇತಿಹಾಸದಲ್ಲಿ ಭಟ್ಟಿ ಕಾವ್ಯಕ್ಕೆ ಒಂದು ಸ್ಥಾನವಿದೆ. ಅಲಂಕಾರಗಳ ಸಂಖ್ಯೆ, ಅವುಗಳ ಲಕ್ಷಣ, ಒಳಪ್ರಭೇದ ಈ ವಿಷಯಗಳ ಮೇಲೆ ಭಟ್ಟಿ ಬೆಳಕು ಚೆಲ್ಲುತ್ತಾನೆ. ಅಲಂಕಾರಗಳ ಲಕ್ಷಣ ಇಲ್ಲದಿರಬಹುದು, ಲಕ್ಷ್ಯದ ಆಧಾರದ ಮೇಲೆಯೇ ಲಕ್ಷಣವನ್ನು ಊಹಿಸಿ ಇತರರೊಡನೆ ಹೋಲಿಸಬಹುದು. ಶಾಸ್ತ್ರಭ್ಯಾಸದಲ್ಲಿ ಆಸಕ್ತಿ ಇಲ್ಲದವರಿಗೆ ಮಧುರವಾದ ಕಾವ್ಯದ ನೆಪದಲ್ಲಿ ಸುಶಬ್ದ ಪ್ರಯೋಗದ ಅರಿವನ್ನುಂಟುಮಾಡುವ ಸಾಹಸವನ್ನು ಭಟ್ಟಿ ಈ ಶಾಸ್ತ್ರಕಾವ್ಯದಲ್ಲಿ ಮಾಡಿ ಸಾಧಿಸಿದ್ದಾನೆ.

	ಈ ಕಾವ್ಯಕ್ಕೆ ಅನೇಕರು ವ್ಯಾಖ್ಯಾನ ಮಾಡಿದ್ದಾರೆ: ಶಂಕರಾಚಾರ್ಯ, ಕುಮುದನಂದನ (ಸುಬೋಧಿನೀ), ಜಯಮಂಗಲ (ಜಯಮಂಗಲಾ), ನಾರಾಯಣ ವಿದ್ಯಾವಿನೋದ (ಭಟ್ಟಿಬೋಧಿನೀ,) ಪುಂದರೀಕಾಕ್ಷ (ಕಲಾಪ್ರದೀಪಿಕಾ), ಭರತಸೇನ (ಮುಗ್ಧ ಬೋಧಿನೀ), ಮಲ್ಲಿನಾಥ, ರಮಾನಂದ, ರಾಮಚಂದ್ರ ವಾಚಸ್ಪತಿ (ಸುಬೋಧಿನೀ), ವಿದ್ಯಾವಿನೋದ (ಭಟ್ಟಿಚಂದ್ರಿಕಾ), ಜೀವಾನಂದ ವಿದ್ಯಾಸಾಗರ (ಕಲಾಪ್ರದೀಪಿಕಾ), ಕಂದರ್ಪಚಕ್ರವರ್ತಿ, ಭರತಮಲ್ಲಿಕ, ಪುರುಷೋತ್ತಮ, ಶ್ರೀಧರ ಮತ್ತು ಹರಿಹರಾಚಾರ್ಯ ಇವರೂ ವ್ಯಾಖ್ಯೆ ಬರೆದಿದ್ದಾರೆಂದು ತಿಳಿದುಬರುತ್ತದೆ.
(ಆರ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ